ಮುಚ್ಚಿ

ಜಿಲ್ಲೆಯ ಬಗ್ಗೆ

ಉತ್ತರ ಕನ್ನಡ ಜಿಲ್ಲೆಯು ರಾಜ್ಯದ ಅತೀ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದ್ದು, ಹೇರಳ ನಿಸರ್ಗ ಸಂಪತ್ತನ್ನು ಹೊಂದಿದೆ. ವಿಭಿನ್ನ ಭೌಗೋಳಿಕ ಲಕ್ಷಣಗಳನ್ನು ಹೊಂದಿರುವ ಜಿಲ್ಲೆಯು ದಟ್ಟ ಅರಣ್ಯ, ಸರ್ವಕಾಲಿಕ ನದಿಗಳು ಮತ್ತು ಹೇರಳ ಸಸ್ಯ ಮತ್ತು ಪ್ರಾಣಿ ಸಂಕುಲನವನ್ನು ಹೊಂದಿರುವುದರ ಜೊತೆಗೆ ಸುಮಾರು 140 ಕಿ.ಮೀ. ಉದ್ದದ ಕರಾವಳಿ ತೀರವನ್ನು ಹೊಂದಿದೆ. ಉತ್ತರದಲ್ಲಿ ಬೆಳಗಾವಿ ಮತ್ತು ಗೋವಾ ರಾಜ್ಯವನ್ನು, ಪೂರ್ವದಲ್ಲಿ ಧಾರವಾಡ ಜಿಲ್ಲೆಯನ್ನು, ದಕ್ಷಿಣದಲ್ಲಿ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯನ್ನು ಹೊಂದಿದೆ. ಪಶ್ಚಿಮದಲ್ಲಿ ಅರಬ್ಬಿ ಸಮುದ್ರದಿಂದ ಆವೃತ್ತವಾಗಿದೆ. ಒಟ್ಟಾರೆ 10.25 ಲಕ್ಷ ಹೆಕ್ಟರ್ ಭೂ ಭಾಗವನ್ನು ಹೊಂದಿರುವ ಜಿಲ್ಲೆಯಲ್ಲಿ 8.28 ಹೆಕ್ಟರಗಳು ಅರಣ್ಯದಿಂದಲೇ ಕೂಡಿದೆ. ಕೇವಲ 1.2 ಲಕ್ಷ ಹೇಕ್ಟರ ಭೂ ಭಾಗ ಮಾತ್ರ (ಸುಮಾರು 10%) ಕೃಷಿ ಮತ್ತು ತೋಟಗಾರಿಕೆಯಿಂದ ಕೂಡಿದೆ. ಜಿಲ್ಲೆಯು ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ, ಹೊನ್ನಾವರ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಮುಂಡಗೋಡ, ಸೂಪಾ (ಜೊಯಿಡಾ), ಹಳಿಯಾಳ, ದಾಂಡೇಲಿ ಎಂಬ 12 ತಾಲೂಕುಗಳನ್ನು ಹೊಂದಿದೆ.

ಈ ಜಿಲ್ಲೆಯಲ್ಲಿ 06 ವಿಧಾನ ಸಭಾ ಕ್ಷೇತ್ರಗಳು, 04 ಕಂದಾಯ ಉಪ ವಿಭಾಗಗಳು, 03 ನಗರಸಭೆ, 04 ಪುರಸಭೆ, 05 ಪಟ್ಟಣ ಪಂಚಾಯತಿಗಳು, 19 ನಾಡಕಛೇರಿ ಕೇಂದ್ರಗಳು, 239 ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರಗಳು, 35 ಹೋಬಳಿ, 231 ಗ್ರಾಮ ಪಂಚಾಯತಿಗಳು ಮತ್ತು 1289 ಗ್ರಾಮಗಳು ಈ ಜಿಲ್ಲೆಯಲ್ಲಿದೆ. ಕನ್ನಡ ಮತ್ತು ಕೊಂಡಣಿ ಪ್ರಧಾನ ಆಡು ಭಾಷೆಗಳಾಗಿವೆ. ಜಿಲ್ಲೆಯಲ್ಲಿ ಶೇ. 10 ಭೂಭಾಗವು ಮಾತ್ರ ಸಾಗುವಳಿ ಪ್ರದೇಶವಾಗಿದ್ದು, ಅರಣ್ಯವೇ ಉಳಿದ ಭಾಗವನ್ನು ಆವರಿಸಿದೆ. ನೈಸರ್ಗಿಕ ಸಂಪತ್ತಿನ ಜೊತೆ ಮಾನವ ನಿರ್ಮಿತ ಅದ್ಭುತ ಕಾರ್ಯಗಳನ್ನು ಕಾಣಬಹುದು. ಅವುಗಳಲ್ಲಿ ಪ್ರಧಾನವಾಗಿರುವುದೆಂದರೆ : ಜಲವಿದ್ಯುತ್ ಶಕ್ತಿ ಯೋಜನೆ ಮತ್ತು ಅಣು ವಿದ್ಯುತ್ ಯೋಜನೆ.

ಮುಖ್ಯವಾದ ಜಲ ವಿದ್ಯುತ್ ಯೋಜನೆಗಳು ; ಸೂಪಾ ಆಣೆಕಟ್ಟು, ಕದ್ರಾ, ಕೊಡಸಳ್ಳಿ, ಗೇರುಸೊಪ್ಪ ಆಣಿಕಟ್ಟುಗಳು ವಿದ್ಯುತ್ ಉತ್ಪಾದನಾ ಘಟಕಗಳೊಂದಿಗೆ ಕೂಡಿವೆ. ಅಣುವಿದ್ಯುತ್ ಯೋಜನೆಯಲ್ಲಿ ಕೈಗಾ ಸ್ಥಾವರವು ಹೆಸರುವಾಸಿಯಾಗಿದೆ. ಮಳೆಗಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯು ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಜಿಲ್ಲೆಯಲ್ಲಿ ಹರಿಯುವ ಪ್ರಧಾನ ನದಿಗಳೆಂದರೆ – ಕಾಳಿ (ಕಾರವಾರ, ಜೊಯಿಡಾ ತಾಲೂಕು) ಅಘನಾಶಿನಿ (ಕುಮಟಾ, ಶಿರಸಿ. ಸಿದ್ದಾಪುರ) ಶರಾವತಿ (ಹೊನ್ನಾವರ) ವೆಂಕಟಾಪುರ ನದಿ (ಭಟ್ಕಳ ತಾಲೂಕು). ಈ ನದಿಗಳು 9 ರಿಂದ 10 ಅಡಿ ಆಳ ಮತ್ತು ನದಿ ದಂಡೆ ಸುಮಾರು 12 ರಿಂದ 15 ಅಡಿ ಎತ್ತರದಲ್ಲಿದೆ.

ಬನವಾಸಿ ಮಧುಕೇಶ್ವರ ದೇವಾಲಯ, ಉಳಿವಿ ಚೆನ್ನಬಸವೇಶ್ವರ, ಇಡಗುಂಜಿಯ ಶ್ರೀ ಸಿದ್ದಿವಿನಾಯಕ ದೇವಾಲಯ, ಗೋಕರ್ಣದ ಮಹಾಬಲೇಶ್ವರ ದೇಗುಲ, ಮುರ್ಡೇಶ್ವರದ ಮಾತೋಬಾರ ದೇಗುಲ, ಶಿರಸಿಯ ಮಾರಿಕಾಂಬ ದೇವಾಲಯಗಳು ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಾಗಿವೆ.

ಜೈನ ಬಸದಿ, ಸ್ವರ್ಣವಲ್ಲಿ ಮಠ, ಸೊಂದಾ ಕೋಟೆ, ಮಿರ್ಜಾನ ಕೋಟೆ ಇತ್ಯಾದಿಗಳು ಪ್ರಸಿದ್ಧ ಪ್ರಾಚೀನ ಸ್ಮಾರಕಗಳಾಗಿವೆ. ಭಟ್ಕಳದ ಮಸೀದಿಯು ತನ್ನ ಕುಸುರಿ ಕೆತ್ತನೆಯಿಂದ ಹೆಸರುವಾಸಿಯಾಗಿದೆ.

ಸುಗ್ಗಿಕುಣಿತ, ಹೋಳಿ ನೃತ್ಯ, ಹುಲಿ ವೇಷ, ಸಿದ್ದಿ ನೃತ್ಯ ಮೊದಲಾದವುಗಳು ಪ್ರಸಿದ್ಧ ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳಾಗಿವೆ. ಜಿಲ್ಲೆಯಲ್ಲಿ ಯಕ್ಷಗಾನವು ಪ್ರಸಿದ್ದ ಕಲೆಯನೆಸಿದೆ.

ಜಿಲ್ಲೆಯ ಕರಾವಳಿಯ ತೀರವನ್ನು ಹೊಂದಿದ್ದರೂ ಕೂಡ ಕಡಲಿನ ಉತ್ಪನ್ನದ ಬಗ್ಗೆ ಅಷ್ಟೊಂದು ಪ್ರಸಿದ್ಧಿ ಪಡೆದಿಲ್ಲ,. ಆದರೆ ಮೀನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳು ಬೃಹತ್ ಪ್ರಮಾಣದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಸಹಾಯದಿಂದ ನಡೆಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರು ಹೆಚ್ಚಾಗಿ ಕೃಷಿಯನ್ನು ಅವಲಂಭಿಸಿರುತ್ತಾರೆ. ಪ್ರಮುಖ ಸಾಂಪ್ರದಾಯಿಕ ಉದ್ಯೋಗಗಳೆಂದರೆ ಕೃಷಿ, ಮೀನುಗಾರಿಕೆ, ಪಶುಸಂಗೋಪನೆ, ರೇಷ್ಮೆ, ತೋಟಗಾರಿಕೆ, ಜೇನು ಸಾಕಣಿ, ಚರ್ಮೋದ್ಯಮಗಳಾಗಿವೆ.

ಜಿಲ್ಲೆಯ ಪ್ರಮುಖ ಬುಡಕಟ್ಟುಗಳೆಂದರೆ – ಸಿದ್ದಿ, ಕುಣಬಿ, ಹಾಲಕ್ಕಿ ಒಕ್ಕಲಿಗ, ಗೊಂಡ, ಮತ್ತು ಗೌಳಿ, ಸಿದ್ದಿ ಜನರು ಸುಮಾರು 400 ವರ್ಷಗಳ ಹಿಂದೆ ಆಫ್ರಿಕಾದಿಂದ ಪೋರ್ಚುಗೀಸರ ಗುಲಾಮರಾಗಿ ಬಂದವರೆಂದು ಹೇಳಲಾಗಿದೆ. ಸರಿಸುಮಾರು 10,000 ಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಸಿದ್ದಿ ಜನಾಂಗವು ಹೆಚ್ಚಾಗಿ ಹಳಿಯಾಳ, ಯಲ್ಲಾಪುರ ಮತ್ತು ಅಂಕೋಲಾ ತಾಲೂಕಿನಲ್ಲಿ ವಾಸಿಸುತ್ತಿದ್ದಾರೆ. ಇದೀಗ ಅವರು ಸಂಪೂರ್ಣವಾಗಿ ಭಾರತೀಯ ಸಂಸ್ಕ್ರತಿಯನ್ನು ಅಳವಡಿಸಿಕೊಂಡಿದ್ದು ಪ್ರಮುಖವಾಗಿ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ. ಸಿದ್ದಿಗಳಲ್ಲಿ ಕೆಲವರು ಮುಸ್ಲಿಂ ಮತ್ತ ಕ್ರೈಸ್ತ್ರ ಮತದ ಅನುಯಾಯಿಗಳಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಾಗಿರುವ ಇವರು ಹವ್ಯಕ ಬ್ರಾಹ್ಮಣರ ತೊಟಗಳಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

ಪಶ್ಚಿಮ ಘಟ್ಟದ ಸಾಲಿನ ತಪ್ಪಲಿನಲ್ಲಿ ವಾಸಿಸುವ ಹಾಲಕ್ಕಿ ಒಕ್ಕಲಿಗರು ಉತ್ತರ ಕನ್ನಡದ ಮೂಲ ನಿವಾಸಿಗಳಾಗಿದ್ದಾರೆ. ಅವರ ಸಂಪ್ರಾದಾಯಿಕ ಜೀವನ ಶೈಲಿ ಅತ್ಯಂತ ವಿಭಿನ್ನವೂ ವಿಶಿಷ್ಟವೂ ಆಗಿದೆ. ಅವರು ತಮ್ಮದೇ ಆದ ಸಾಮಾಜಿಕ ಆಡಳಿತ ಪದ್ಧತಿಯನ್ನು ಅನುಸರಿಸುತ್ತಿದ್ದು ಸಮಾಜದ ಮುಖ್ಯಸ್ಥನನ್ನು ‘ಗೌಡ’ ಎಂದು ಕರೆಯಲಾಗುತ್ತಿದ್ದು ಅವರು ಇಂದಿಗೂ ಪುರಾತನ ಜೀವನ ಪದ್ಧತಿಯನ್ನು ಅನುಸರಿಸುತ್ತಿದ್ದು ಸಮಾಜದ ಮುಖ್ಯ ವಾಹಿನಿಗೆ ತರುವ ಅವಶ್ಯಕತೆ ಇದೆ. ಗಂಡಸರು ಮನೆಯಲ್ಲಿ ಮೇಲುಡುಗೆಯಿಲ್ಲದೇ ಇರುತ್ತಾರೆ. ಸ್ತ್ರೀಯರು ಕತ್ತಿನ ತುಂಬ ಮಣಿಸರವನ್ನು ದೊಡ್ಡ ಮಾಗುತಿಯನ್ನು ಧರಿಸುತ್ತಾರೆ.ಗೌಳಿಗಳು ಮಹಾರಾಷ್ಟ್ರದಿಂದ ವಲಸೆಬಂದವರಾಗಿದ್ದು. ಆಕಳು ಮತ್ತು ಕುರಿಸಾಕಣೆಯಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಗೌವಳಿಗಳು ಕಾಡಿನಂಚಿನಲ್ಲಿ ವಾಸಿಸುತ್ತಿದ್ದು ಕೆಲವರು ಕೃಷಿ ಕೆಲಸವನ್ನು ಅವಲಂಬಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅತೀ ಹಿಂದುಳಿದ ಬುಡಕಟ್ಟು ಜನಾಂಗವೇ ಕುಣಬಿಗಳು. ಕಾಡಿನ ಮಧ್ಯದಲ್ಲಿ ಸಣ್ಣ-ಸಣ್ಣ ಗುಂಪುಗಳಾಗಿ ಬಿದಿರಿನ ಗುಡಿಸಲಿನಲ್ಲಿ ಸಾಲಾಗಿ ವಾಸಿಸುತ್ತಾರೆ.ಉತ್ತಮ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಮರಣ ಪ್ರಮಾಣವು ಹೆಚ್ಚಾಗಿದೆ.ಗೊಂಡರು ಭಟ್ಕಳ ತಾಲೂಕಿನ ಕಾಡಿನ ಮಧ್ಯೆ ವಾಸಿಸುತ್ತಾರೆ. ಇವರು ಜೀವನಕ್ಕಾಗಿ ಅರಣ್ಯ ಉತ್ಪನ್ನಗಳನ್ನು ಅವಲಂಬಿಸಿರುತ್ತಾರೆ. ಅವರಲ್ಲಿ ಸಾಂಪ್ರದಾಯಿಕ ಬುಡಕಟ್ಟು ನೃತ್ಯ ಕಲೆಯು ಶ್ರೀಮಂತವಾಗಿದೆ.